ಮಕ್ಕಳನ್ನು ಕಾಡುವ ನೆಗಡಿ-ಅಸ್ತಮಾ(Part-2)

ಮಕ್ಕಳನ್ನು ಕಾಡುವ ನೆಗಡಿ-ಅಸ್ತಮಾ(Part-2)

ನೆಗಡಿಯೊಂದಿಗೆ ನಿಮ್ಮ ಮಕ್ಕಳಿಗೆ ಉದರದ ತೊಂದರೆಗಳಾದ-
• ಚನ್ನಾಗಿ ತಿನ್ನುವ ಬದಲು ಉಬ್ಬಳಿಸಿಕೊಳ್ಳುತ್ತಾರೆ.
• ಹೊಟ್ಟೆ ಉಬ್ಬರಿಸಿರುತ್ತದೆ.
• ಮಲಬದ್ಧತೆ ಇರುತ್ತದೆ.
• ಆಗಾಗ ದ್ರವಮಲ ಪ್ರವೃತ್ತಿಯಾಗುತ್ತದೆ.
• ಒಮ್ಮೊಮ್ಮೆ ವಿಪರೀತ ಹಸಿವಿನಿಂದ ಸಂಕಟಪಡುತ್ತಾರೆ.

ಹೌದು ಎಂದಾದರೆ ನಿಜವಾದ ಪರಿಹಾರಕ್ಕೆ ಮುಂದಾಗಿ- ಏಕೆಂದರೆ ಕೇವಲ ಹಿಸ್ಟಮಿನ್ ನಿಯಂತ್ರಕ ಮಾತ್ರೆಗಳು ಸೋರುವ ಮೂಗಿಗೆ ಬೆಣೆ ಇಟ್ಟವರಂತೆ ತಡೆಯಬಹುದು, ಆದರೆ ಉದರದೊಳಗಿನ ಸಮಸ್ಯೆಗಳನ್ನು ಸ್ವಲ್ಪವೂ ಸರಿಪಡಿಸಲಾರವು. ತತ್ಕಾರಣ ಮುಂದೆ ಅದು ಅಸ್ತಮಾದ ಮುಖಾಂತರ ಪುಪ್ಫುಸಗಳನ್ನೋ ಅಥವಾ ಕಫಯುಕ್ತ ಮೂತ್ರಪ್ರವೃತ್ತಿಯೊಂದಿಗೆ ಮೂತ್ರಪಿಂಡಗಳನ್ನೋ ಅಥವಾ ಚರ್ಮಕ್ಕೋ ಧಕ್ಕೆಯನ್ನುಂಟುಮಾಡುತ್ತವೆ.

ಇಲ್ಲಿ ಹಿಸ್ಟಮಿನ್ ನಿಯಂತ್ರಕ ಮಾತ್ರೆಗಳನ್ನು ಬಳಸಬಾರದೆಂದಲ್ಲ, ಆದರೆ ಅದರ ಅವಶ್ಯಕತೆ ಕೇವಲ ನೂರಕ್ಕೆ 1-2% ಮಕ್ಕಳಿಗೆ ಅದೂ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಯೋಗ್ಯವೇ ಹೊರತು ನಿಜವಾದ ಸಮಸ್ಯೆಯನ್ನು ಒಳಗೊಳಗೇ ಬೆಳೆಯಲು ಅವಕಾಶವನ್ನೀಯುವ ಈ ಮಾತ್ರೆಗಳ ಬಳಕೆ ಸಲ್ಲದು.

ಸಂಪೂರ್ಣ ಗುಣವಾಗಲು ಏನು ಆಹಾರ ಬಿಡಬೇಕು?
▪️ಕನಿಷ್ಠ 24 ಗರಿಷ್ಠ 48 ದಿನಗಳ ಕಾಲ ಈ ಕೆಳಗಿನ ಆಹಾರಗಳನ್ನು ನಿಲ್ಲಿಸಿ
1) ಎಲ್ಲಾ ರೀತಿಯ ಸಿಹಿ ಪದಾರ್ಥಗಳನ್ನು ನಿಲ್ಲಿಸಿ.
ಇದರಿಂದ ಮಲಕಫ ಹೆಚ್ಚುವ ಕಾರಣ ಅದು ಪುಪ್ಪುಸಗಳಿಗೆ ಸೇರುತ್ತದೆ
(ಚಿಕಿತ್ಸಾ ನಂತರ ಸ್ವಲ್ಪ ಸಿಹಿಯನ್ನು ಆಗಾಗ ಕೊಡಬಹುದು, ನಿರಂತರ ಅಲ್ಲ.)

2) ಎಲ್ಲಾ ರೀತಿಯ ಮಾಂಸಾಹಾರ ಮತ್ತು ವಗ್ಗರಣೆ ಕಲಸಿದ ಅನ್ನಗಳು-ಕರಿದ ಪದಾರ್ಥಗಳನ್ನು ನಿಲ್ಲಿಸಿ. ಇದರಿಂದಲೂ ಮಲ‌ಕಫ ಹೆಚ್ಚುತ್ತದೆ, ಇದು ವಿಶೇಷವಾಗಿ ಚರ್ಮದ ಅಲರ್ಜಿ ಅಥವಾ ಮೂತ್ರಪಿಂಡಗಳ ತೊಂದರೆಯನ್ನುಂಟುಮಾಡುತ್ತವೆ.

3) ತಾಜಾ ಇದ್ದರೂ ಸಹ ಬಾಳೆಹಣ್ಣು, ಮೊಸರನ್ನು ನಿಲ್ಲಿಸಿಬಿಡಿ. ಏಳುವರ್ಷದ ಒಳಗಿನ ಮಕ್ಕಳಿಗೆ ಮೊಸರು ಸೇವನೆ ಸಂಪೂರ್ಣ ನಿಶಿದ್ಧ- ಅದರೊಳಗೆ ಎಷ್ಟೇ ಗುಣಕಾರಿ ಅಂಶಗಳಿದ್ದರೂ ಚಿಕ್ಕ ಮಕ್ಕಳ ಶಿರಸ್ಸು, ಕಣ್ಣು, ಕಿವಿ, ಮೆದುಳು, ಪುಪ್ಪುಸಗಳು ಸಂಪೂರ್ಣ ಶುದ್ಧ ಕಫದಿಂದ ಕೂಡಿರುತ್ತವೆ (ಆ ಕಾರಣದಿಂದಲೇ ಮಕ್ಕಳ ತಲೆ ಸ್ವಲ್ಪ ಬಿಸಿಯಿಂದ ಕೂಡಿರುತ್ತದೆ) ಮೊಸರು ಅಲ್ಲಿ ವಿಕೃತ ಅಥವಾ ಮಲಕಫವನ್ನು ತುಂಬುತ್ತದೆ.

4) ಅತಿಯಾದ ಹುಳಿ ತಿನ್ನಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ. ಏಳು ವರ್ಷದೊಳಗಿನ ಮಕ್ಕಳಿಗಂತೂ ಹುಳಿಯ ಅಗತ್ಯ ಇಲ್ಲವೇ ಇಲ್ಲ.

ಏನು ವಿಹಾರ?
1) ಫ್ಯಾನ್ ಗಾಳಿಗೆ ಮಲಗಿಸಬೇಡಿ.
2) ತಡರಾತ್ರಿ ಊಟ ಮಾಡಿಸಬೇಡಿ.
3) ದ್ವಿಚಕ್ರ ವಾಹನಗಳಲ್ಲಿ ಮುಂದೆ ಕೂಡಿಸಿಕೊಂಡು ಹೋಗಬೇಡಿ.
4) ಧೂಳು ಹೆಚ್ಚಿರುವ ಸ್ಥಳ, ಮಾರುಕಟ್ಟೆಗಳಿಗೆ ಏಳು ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯಬೇಡಿ.
5) ಊದುಬತ್ತಿಯ, ಸುಗಂಧದ್ರವಗಳ ಬಳಕೆ ಬೇಡ.

ಈ ನೆಗಡಿಗೆ ಸರಳ ಉಪಾಯ ಏನು?
▪️ ಮೇಲಿನ ಆಹಾರ-ವಿಹಾರ ಪಾಲಿಸಿದರೆ ಸಾಕು
ಔಷಧ ರಹಿತವಾಗಿ ಗುಣವಾಗುತ್ತದೆ.
▪️ ಸವಲ್ಪ ಬೆಚ್ಚಗಿನ ನೀರನ್ನು ಕೊಡಿ.
▪️ ಆದಾಗ್ಯೂ ಬೇಕೆಂದರೆ ಆರು ವಾರಗಳ ಕಾಲ ಶುದ್ಧ ಅರಿಶಿಣದ ¼ಚಮಚ ಪುಡಿಯನ್ನು ಬಿಸಿಹಾಲಿಗೆ ಹಾಕಿ ಪ್ರತಿದಿನ ಬೆಳಿಗ್ಗೆ ಕುಡಿಸಿ. ಸ್ವಲ್ಪ ಬೆಲ್ಲ ಸೇರಿಸಬಹುದು.

ಅಸ್ತಮಾ ಬರದಂತೆ ಹೇಗೆ ತಡೆಯಬಹುದು?
▪️ ಇದಕ್ಕೆ ಆಹಾರ-ವಿಹಾರ ಪಾಲನೆಯೇ ಸಂಪೂರ್ಣ ಪರಿಹಾರ.

ಅಸ್ತಮಾ ಬಂದರೆ ಏನು ಮಾಡಬೇಕು?
▪️ ತಕ್ಷಣ ಆಯುರ್ವೇದ ವೈದ್ಯರನ್ನು ಕಾಣಿರಿ,
▪️ ಮೇಲಿನ ಆಹಾರ ನಿಯಮ ಪಾಲಿಸಿ.
▪️ ದೀರ್ಘಕಾಲೀನ ಚಿಕಿತ್ಸೆಯಾದರೂ ಸರಿ ಆಯುರ್ವೇದವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಚಿಕ್ಕ ಮಕ್ಕಳಲ್ಲಿನ ಅಸ್ತಮಾವನ್ನು ಶಾಶ್ವತವಾಗಿ ಗುಣಪಡಿಸಬಹುದು.

ಪುಪ್ಫುಸಕ್ಕೆ ಹೊಡೆದುಕೊಳ್ಳುವ ಸ್ಟಿರಾಯ್ಡ್ ಪಂಪ್ ಗಳು ಸುರಕ್ಷಿತವೇ?
▪️ ಖಂಡಿತಾ ಅಲ್ಲ, ಕೇವಲ ಆತ್ಯಾಯಿಕ(ತುರ್ತು) ಅವಸ್ಥೆಗಳನ್ನು ಹೊರತುಪಡಿಸಿ ಸ್ಟಿರಾಯ್ಡ್ ಪಂಪ್ ಬಳಕೆ ಶುದ್ಧ ತಪ್ಪು. ಕೆಲವು ಮಕ್ಕಳ ವೈದ್ಯರು ಹೇಳುತ್ತಾರೆ- ಮಾತ್ರೆಗಳಿಗಿಂತ ಪಂಪ್ ಗಳು ಸುರಕ್ಷಿತ ಎಂದು. ಆದರೆ ಅವರು ಅಲೋಪತಿಯ ಸ್ಟೀರಾಯ್ಡ್ ಮಾತ್ರೆಗಳಿಗೆ ಹೋಲಿಸಿ ಹೇಳುತ್ತಾರೆಯೇ ಹೊರತು ಅಮೃತಸಮಾನ ಆಯುರ್ವೇದ ಔಷಧಿಗೆ ಹೋಲಿಸುತ್ತಿಲ್ಲ‼️

ಇವುಗಳ( ಸ್ಟಿರೊಯ್ಡ್ ಪಂಪ್) ಕೆಲಸ ಎಂದರೆ, ಉಸಿರ್ನಾಳದಲ್ಲಿನ ಶುದ್ಧ ಕ್ಯಾಲ್ಷಿಯಂ ಅನ್ನು ಕ್ಷೀಣಗೊಳಿಸಿ, ಅದರ ಬಿಗಿತನವನ್ನು ಸಡಿಲಿಸಿ, ಅಗಲಗೊಳಿಸಿ, ಗಾಳಿಯಾಡುವಂತೆ ಮಾಡುತ್ತವೆ. ಆದರೆ ನಿರಂತರ ಬಳಕೆಯಿಂದ, ಕಾಲಕ್ರಮದಲ್ಲಿ ‘ಮೂಳೆಯಲ್ಲಿನ‌ ಕ್ಯಾಲ್ಷಿಯಂನ್ನೂ ಸಹ ಕ್ಷೀಣವಾಗಿಸುತ್ತವೆ’.
ತಾವೆಲ್ಲಾ ನೋಡಿರಬಹುದು ಈ ರೀತಿಯ ಸ್ಟಿರಾಯ್ಡ್ ಮಾತ್ರೆ ಪಂಪ್ ಬಳಸುವವರ ಮೂಳೆಗಳ ಶಕ್ತಿ ದುರ್ಬಲವಾಗಿರುತ್ತದೆ. ಇನ್ನು ಬೆಳೆಯುವ ಮಕ್ಕಳ ಜೀವನ ಏನಾಗಬಹುದು ಊಹಿಸಿ

ಆಯುರ್ವೇದ ಔಷಧಿಗಳು ಹೇಗೆ ಕೆಲಸ ಮಾಡುತ್ತವೆ?
1) ಅಗ್ನಿಸ್ಥಾನವಾದ ಗ್ರಹಣಿಯಲ್ಲಿ ವಿಕೃತ ಕಫ ಉತ್ಪತ್ತಿಯನ್ನು ತಡೆಯುತ್ತವೆ. ತನ್ಮೂಲಕ ಅಲರ್ಜಿ ಉಂಟುಮಾಡುವ ಜೀವಕೋಶಗಳಿಗೆ ಆಹಾರ ಇಲ್ಲದಂತೆ ಮಾಡುತ್ತವೆ.

2) ವಾತ ವಿಕೃತಿಯನ್ನು ತಡೆದು ಅದಕ್ಕೆ ಪ್ರಾಕೃತ ಚಲನೆಯನ್ನು ನೀಡುತ್ತವೆ. ಇದರಿಂದ ಕಫವು ಎಲ್ಲಂದರಲ್ಲಿ ಶೇಖರಣೆಯಾಗುವ ಮತ್ತು ಊತವನ್ನುಂಟುಮಾಡುವ ಬದಲು ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜೆ, ಶುಕ್ರ ಧಾತುಗಳಿಗೆ ಆಹಾರವನ್ನು ಒದಗಿಸಿ, ನಮ್ಮ ಚಟುವಟಿಕೆಗಳ ಮೂಲಕ ಶಕ್ತಿಯನ್ನು ಹೊರಹಾಕಿ ಕರಗಿಬಿಡುತ್ತದೆ.
ಆತ್ಮೀಯರೇ,
ನೆಗಡಿಯಿಂದ ನಲುಗಬೇಡಿ-ನಿಜವಾದ ನಿವಾರಣೆಗೆ ಯತ್ನಿಸಿ.

-ಡಾ.ಮಲ್ಲಿಕಾರ್ಜುನ ಡಂಬಳ

Admin

Leave a Reply

Your email address will not be published. Required fields are marked *

error: Content is protected !!