ಮನಸ್ಸಿನ ಕಿರಿಕಿರಿ ನಿವಾರಣೆ ಹೇಗೆ?

ಮನಸ್ಸಿನ ಕಿರಿಕಿರಿ ನಿವಾರಣೆ ಹೇಗೆ?

ಡಾಕ್ಟ್ರೇ ನನ್ನ ಹೆಂಡತಿಗೆ / ಗಂಡನಿಗೆ ಬಹಳಾ ಕೋಪ, ಬಿ.ಪಿ. ಏನಾದ್ರೂ ಇದೆಯೇ? ನೋಡಿ…

ಇವು ನಾವು ನಿತ್ಯ ಕೇಳುವ ಸಾಮಾನ್ಯ ಸಂಗತಿಗಳು…

ವಾಸ್ತವದಲ್ಲಿ ಇದು ಕೋಪವೇ ಅಲ್ಲ, ಮಾನಸಿಕ ಕಿರಿಕಿರಿ!!

ಏನೋ ಸಂಗತಿ ಅವರಂತೆ ನಡೆಯದಿದ್ದರೆ ಒಳಗೆ ವಿಪರೀತ ಕಿರಿಕಿರಿ ಆಗುತ್ತದೆ, ಆಗ ಮನೆಯವರ, ಮಕ್ಕಳ, ವೃದ್ಧ ತಂದೆ-ತಾಯಿಗಳ, ಸಮೀಪದ ಸ್ನೇಹಿತರ ಮೇಲೆ ರೇಗಾಡುತ್ತಾರೆ. ಅದು ಕೋಪದಂತೆ ಕಾಣುತ್ತದೆ, ಆದರೆ ಸುಟ್ಟುಕೊಳ್ಳುವವರು ಅವರೇ ಎಂಬುದು ತಿಳಿದಿರುವುದಿಲ್ಲ.

ಅಚ್ಚರಿ ಎಂದರೆ ಇಂತವರು ಹೊರಗಡೆ ತುಂಬಾ ಒಳ್ಳೆಯ ವ್ಯಕ್ತಿ ಎಂಬ ಹೆಸರು ಗಳಿಸಿರುತ್ತಾರೆ!!!!

ಕಾರಣ ಮತ್ತು ‌ಪರಿಹಾರಗಳನ್ನು ನೋಡೋಣ…

ಮನಸ್ಸಿಗೆ ಏಕೆ ಕಿರಿಕಿರಿಯಾಗುತ್ತದೆ?
ದೊಡ್ಡ ದೊಡ್ಡ ಪ್ರಸಂಗಗಳನ್ನೂ ಕೆಲವರು ಸರಳವಾಗಿ ನಿಭಾಯಿಸುತ್ತಾರೆ, ಕೆಲವರು ಸಣ್ಣ ವಿಷಯಗಳಿಗೆ ಕಿರಿಕಿರಿ ಮಾಡಿಕೊಳ್ಳುತ್ತಾರೆ, ಗಮನಿಸಿ ನೋಡಿ — ಒಂದು ಮನೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಾಗೆಯೇ ಇರುತ್ತಾರೆ. ಇನ್ನೊಂದು ಮನೆಯಲ್ಲಿ ಹೆಚ್ಚು ಕಮ್ಮಿ ಎಲ್ಲರೂ ಕಿರಿಕಿರಿಯಲ್ಲೇ ಇರುತ್ತಾರೆ…

ಮನಸ್ಸು ಬಾಲ್ಯದ ಆಹಾರದ ಮೇಲೆ ಮತ್ತು ತಾಯಿಯ ಮೇಲೆ ಪ್ರಭಾವಿತವಾಗಿ ನಿರ್ಮಿತವಾಗುತ್ತದೆ…

ಹಾಗೆಯೇ, ಈಗಲೂ ಸಹ ಮನಸ್ಸು ಆಹಾರದ ಮೇಲೆ ಅವಲಂಬಿತವಾಗಿ ವರ್ತಿಸುತ್ತದೆ ಮತ್ತು ಕಾರ್ಯ ನಿರ್ವಹಿಸುತ್ತದೆ.

ಹಿಂದೆ ಏನಾಗಿತ್ತೋ ಬಿಡಿ, ಅದನ್ನು ಬದಲಾಯಿಸಲು ಅಸಾಧ್ಯ. ಈಗ ಏನಾಗುತ್ತಿದೆ ನೋಡೋಣ…

ಒಬ್ಬ ಮೃದು ಜೀವಿಗೆ ಒಮ್ಮೆಗೇ ಚೆನ್ನಾಗಿ ಮದ್ಯಸೇವನೆ ಮಾಡಿಸಿದರೆ, ಆತ ವಿಚಿತ್ರ ಭಾಷೆ, ಆಚಾರಗಳನ್ನು ತೋರುತ್ತಾನೆ ಅಲ್ಲವೇ? ಅಂದರೆ, ನಾವು ಉದರಕ್ಕೆ ಕಳಿಸಿದ ಪದಾರ್ಥ ಮನಸ್ಸನ್ನೂ ನಿರ್ವಹಿಸುತ್ತದೆ.

ನಾವು ಕೇವಲ ಹಣ್ಣುಗಳನ್ನೇ ತಿಂದು ಇದ್ದಾಗ, ಹೊಟ್ಟೆ ತುಂಬಾ ಆಹಾರ ತಿಂದಾಗ, ಮೊಸರು ತಿಂದಾಗ, ಹಾಲು ಕುಡಿದಾಗ, ದೋಸೆ ತಿಂದಾಗ, ನೀರುದೋಸೆ ತಿಂದಾಗ, ಖಾರ ತಿಂದಾಗ, ಸಿಹಿ ತಿಂದಾಗ ನಮ್ಮ ಮನಸ್ಸು ಒಂದೇ ತೆರನಾಗಿ ಇರುವುದಿಲ್ಲ. ಒಂದು ಆಹಾರದ ನಂತರ ಮಂದತ್ವ ಬಂದರೆ, ಮತ್ತೊಂದರಿಂದ ತೀವ್ರತೆ ಬರುವುದಿಲ್ಲವೇ? ಏಕೆ ಹೀಗೆ ನೋಡೋಣ…

ಆಹಾರದ ಸೂಕ್ಷ್ಮ ಭಾಗ ಮನಸ್ಸನ್ನೂ, ಸ್ಥೂಲ‌ಭಾಗ ದೇಹವನ್ನೂ ಪೋಷಿಸುತ್ತದೆ.
ನಮಗೆ ಸ್ಥೂಲ ಭಾಗವನ್ನು ಈಗ ರಾಸಾಯನಿಕಗಳ ಆಧಾರದಲ್ಲಿ ಗುರುತಿಸಲು ಆಗುತ್ತಿದೆ. ಆದರೆ ಸೂಕ್ಷ್ಮ ಭಾಗವನ್ನು ಗುರುತಿಸಲು ಆಯುರ್ವೇದ ಆಚಾರ್ಯರು ಹೇಳಿದ ಮಾತುಗಳನ್ನು ಕೇಳಬೇಕು ಅಥವಾ ಸೇವನೆಯ ನಂತರದ ಮನಸ್ಸಿನ ಪರಿಣಾಮವನ್ನು ಗಮನಿಸಬೇಕು.

ಅಂದರೆ ನಮ್ಮ ಮನಸ್ಸಿನ ಕಿರಿಕಿರಿಗೆ ನೇರ ಕಾರಣ ಆಹಾರ ಎಂದಾಯ್ತು…

ಪರಿಹಾರ ನೋಡೋಣ:
ರಜೋಗುಣ ವರ್ಧಕ ಆಹಾರಗಳು ಮನಸ್ಸನ್ನು ತೀವ್ರಗೊಳಿಸುತ್ತವೆ, ಉತ್ತೇಜಿಸುತ್ತವೆ. ಶರೀರವು ಬಾಲ್ಯದಿಂದಲೂ ಚೆನ್ನಾಗಿ ಪೋಷಣೆ ಆಗಿದ್ದರೆ ಆ ಉತ್ತೇಜನವನ್ನು ಸ್ವೀಕರಿಸಿ ಕ್ರಿಯೆಯ ಮೂಲಕ ಹೊರಹಾಕುತ್ತಾರೆ.

ಬಾಲ್ಯದಲ್ಲಿ ಕುಪೋಷಣೆಗೆ ಒಳಗಾಗಿದ್ದಲ್ಲಿ ಸಣ್ಣ ಉತ್ತೇಜನವೂ ಕಿರಿಕಿರಿಯಾಗಿ ಹೊರಹೊಮ್ಮುತ್ತದೆ. ಬಾಲ್ಯದಲ್ಲಿ ಎಷ್ಟೇ ಚೆನ್ನಾಗಿ ಪೋಷಣೆಯಾಗಿದ್ದರೂ, ಈಗ ಬಹಳ ಕಾಲ ಸರಿಯಾಗಿ ಪೋಷಣೆ ಮಾಡಿಕೊಳ್ಳದೇ, ಹೆಚ್ಚಿನ ಶ್ರಮದಲ್ಲಿ ಕೆಲಸ ಮಾಡುತ್ತಾ ಹೋದರೆ, ರಾತ್ರಿ ನಿದ್ದೆ ಕೆಡುತ್ತಾ ಕಳೆದರೆ, ಆಹಾರದ ಉತ್ತೇಜಕ ಶಕ್ತಿಯನ್ನು ತಡೆದುಕೊಳ್ಳುವ ಶರೀರದ ಸಾಮರ್ಥ್ಯ ನಿಧಾನವಾಗಿ ಕ್ಷೀಣಿಸಿ ಕಿರಿಕಿರಿ ಆರಂಭವಾಗುತ್ತದೆ.

ಈಗ ಏನು ಮಾಡಬಹುದು?
ಉತ್ತೇಜಕ ಆಹಾರಗಳನ್ನು ಸೇವಿಸದೇ ಇರುವುದು. ಉದಾಹರಣೆಗೆ: ಕಾಫೀ, ಟೀ, ಹುಳಿ ಬರಿಸಿದ ದೋಸೆ, ಇಡ್ಲಿಗಳು, ಖಾರ, ಮೆಣಸು, ಲವಂಗ, ಚಕ್ಕೆ ಮಾಂಸಾಹಾರ ಇವುಗಳು…

ಉತ್ತೇಜಕ ವಿಚಾರಗಳನ್ನು ನಿರ್ವಹಿಸುವುದು:
ಕೌಟುಂಬಿಕ ಪರಿಸರದಲ್ಲಿ ಉತ್ತೇಜಕ ಮಾತು ವರ್ತನೆಗಳು ಅತ್ಯಂತ ಸಾಮಾನ್ಯ. ಅವುಗಳನ್ನು ನಿವ೯ಹಿಸುವ ವಿವಿಧ ವಿಧಾನಗಳಿವೆ…

ಉಪೇಕ್ಷೆ ಮಾಡುವುದು, ಇದು ಉತ್ತಮ‌ ಪದ್ಧತಿ ಅಲ್ಲ. ಹೀಗೆ ತಪ್ಪಿಸಿಕೊಂಡರೆ ಮುಂದೆ ಬಲವಾಗಿ ಅಪ್ಪಳಿಸುತ್ತವೆ.ಅನುಭವಿಕರ ಸಲಹೆ, ಪುಸ್ತಕಗಳ ಮಾಹಿತಿ, ಮನೋವೈದ್ಯಕೀಯ ಸಲಹೆ ಪಡೆದು ನಮ್ಮ ಕಿರಿಕಿರಿಯ ಕಾರಣವನ್ನು ಸರಿಯಾಗಿ ನಿರ್ವಹಿಸುವುದು. ಇದು ಮಧ್ಯಮ‌ ವಿಧಾನ ಇದರಲ್ಲಿ ಬಾಹ್ಯದ ಬೆಳವಣಿಗೆ ಇರುತ್ತದೆ.ಅತ್ಯುತ್ತಮ ವಿಧಾನ ಎಂದರೆ “ಜೀವಚೈತನ್ಯ ಇರುವ ವಾಸ್ತವ ರೀತಿಯನ್ನು ಅರ್ಥಮಾಡಿಕೊಳ್ಳುವುದು”, ಇದು ಅತ್ಯಂತ ಶ್ರೇಷ್ಠ ಮತ್ತು ಯಶಸ್ವೀ ವಿಧಾನವಾಗಿದೆ. ಇದರಲ್ಲಿ ಬೆಳವಣಿಗೆಯು ಬಾಹ್ಯದಲ್ಲಷ್ಟೇ ಅಲ್ಲ, ಆಂತರಿಕವಾಗಿಯೂ ಇರುತ್ತದೆ. ಪರಮ ಶಾಂತಿ, ಗಾಂಭೀರ್ಯ ಮತ್ತು ಯಶಸ್ಸು ಶಾಶ್ವತವಾಗಿ ಇರುತ್ತದೆ. ಇದಕ್ಕೆ ಸದ್ಗುರುವಿನ ಮಾರ್ಗದರ್ಶನ, ಅತಾರ್ಕಿಕ ಸ್ವೀಕಾರ ಬೇಕಾಗುತ್ತದೆ. ಆತ್ಮೀಯರೇ, ಒಂದೊಂದೇ ಹೆಜ್ಜೆಯನ್ನು ನಿಧಾನವಾಗಿ ಇಡೋಣ, ಗೆಲ್ಲುತ್ತೇವೆ.
• ಆಹಾರ ಬದಲಾವಣೆ
• ತಾರ್ಕಿಕ ಆಲೋಚನೆ ಮತ್ತು ವರ್ತನೆ
• ಅತಾರ್ಕಿಕ ಸ್ವೀಕಾರ ಮತ್ತು ಸತ್ಯದೊಂದಿಗೆ ಪಯಣ

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645
ATHARVA Ayurveda Hospital & Research Institute

Admin

Leave a Reply

Your email address will not be published. Required fields are marked *

error: Content is protected !!