ದೃಷ್ಟಿದೋಷ ನಿವಾರಣೆಗೆ ಮಜ್ಜಾ ಧಾತುವಿನ ಶಕ್ತಿಯನ್ನು ವರ್ಧಿಸುವುದೇ ಪರಿಹಾರ ಮಜ್ಜಾ ಧಾತುವಿನ ಶಕ್ತಿ ವರ್ಧನೆ ಹೇಗೆ..?

ದೃಷ್ಟಿದೋಷ ನಿವಾರಣೆಗೆ ಮಜ್ಜಾ ಧಾತುವಿನ ಶಕ್ತಿಯನ್ನು ವರ್ಧಿಸುವುದೇ ಪರಿಹಾರ ಮಜ್ಜಾ ಧಾತುವಿನ ಶಕ್ತಿ ವರ್ಧನೆ ಹೇಗೆ..?

ಮೂಳೆಯೊಳಗೆ ಅತ್ಯಂತ ಸಾರ ಅಂಶದಿಂದ ಮಾಡಲ್ಪಟ್ಟ ಮಜ್ಜಾಧಾತುವನ್ನು ಪೋಷಣೆ ಮಾಡುವುದು ಹೇಗೆ? ಯಾವ ಮಾರ್ಗದಿಂದ ಅದನ್ನು ತಲುಪಬಹುದು? ಅನೇಕ ಓದುಗರು ಕೇಳಿದ್ದಾರೆ ಕಣ್ಣಿನ ರಕ್ಷಣೆಗೆ ಮಜ್ಜಾ ಪೋಷಣೆ ಮಾಡಲು ತಿಳಿಸಿದ್ದೀರಿ, ಆದರೆ ಅದಕ್ಕೆ ಏನನ್ನು ತಿನ್ನಬೇಕು ತಿಳಿಸಿ ಎಂದು….!?!

ಆಧುನಿಕ ಜೀವನಶೈಲಿಯೇ ಹಾಗೆ, ಏನನ್ನು ತಿಂದರೆ ಕಣ್ಣಿಗೆ ಒಳ್ಳೆಯದು? ಏನನ್ನು ತಿಂದರೆ ಮೂಳೆಗೆ ಒಳ್ಳೆಯದು? ಹೀಗೆ ಅತೀ ಸಣ್ಣ ಪ್ರಮಾಣದಲ್ಲಿ ಜ್ಞಾನವನ್ನು ಈ ಜಗತ್ತಿಗೆ ಹಂಚಿ ವಾಸ್ತವವನ್ನು ದೂರ ಇರಿಸಿದ್ದಾರೆ…

ಏನು ತಿಂದರೆ ಹಲ್ಲಿಗೆ ಒಳ್ಳೆಯದು ಎಂದು ಹೇಳಿ, ತಿನ್ನಿಸಿ ಡೆಂಟಲ್ ಕ್ಲಿನಿಕ್ ಹೆಚ್ಚಾಗುತ್ತಿವೆ. ಹಾಗೆಯೇ ಏನು ತಿಂದರೆ ರಕ್ತಕ್ಕೆ, ಮೂಳೆಗೆ ಒಳ್ಳೆಯದೆಂದು ತಿನ್ನಿಸಿಯೂ ರಕ್ತದ‌ ಕೊರತೆ, ಮೂಳೆಯ ಸವೆಯ ಯಥೇಚ್ಛವಾಗಿದೆ!

ಹಾಗಾಗಿ, ಆತ್ಮೀಯರೇ, ದಯಮಾಡಿ ಸತ್ಯವನ್ನು ಅರಿಯಿರಿ, ಏನನ್ನು ತಿಂದರೆ ಒಳ್ಳೆಯದೋ ಅದನ್ನು ಜೀರ್ಣಿಸಿ, ಹೀರಿಕೊಳ್ಳುವ ಸ್ಥಾನವನ್ನು ಸರಿಯಾಗಿ ಇಟ್ಟುಕೊಂಡರೆ ಮಾತ್ರ ಅದು ಒಳ್ಳೆಯದು, ಇಲ್ಲದಿದ್ದರೆ ಅದು “ಆಮವಿಷ” ವೇ ಆಗುವುದು. ಆಹಾರ ಪಚಿಸದಿದ್ದರೆ ಫುಡ್ ಪಾಯ್ಸನ್ ಆಗುತ್ತದೆ ಎಂಬುದು ಬಹುತೇಕರ ಗಮನಕ್ಕೆ ಬಂದಿದೆಯಲ್ಲವೇ?

ಇರಲಿ, ಮಜ್ಜಾಧಾತುವನ್ನು ತಲುಪಲು ಇರುವ ಮಾರ್ಗವನ್ನು ಶುದ್ಧಿಗೊಳಿಸಿ, ಮಜ್ಜಾಪೋಷಣೆಗೆ ಬೇಕಾದ ಆಹಾರ ಸೇವನೆ ಮಾಡಿದರೆ ಅದು ನೇತ್ರವನ್ನು ರಕ್ಷಿಸುವುದಷ್ಟೇ ಅಲ್ಲ ರಕ್ತಕಣಗಳ ಉತ್ಪತ್ತಿಯನ್ನೂ ಮಾಡುತ್ತದೆ! 🤔

ಮಜ್ಜೆಯನ್ನು ತಲುಪುವ ಮಾರ್ಗ ಯಾವುದು?

📜 ||ಯಾ ಏವ ಮಜ್ಜಾಧರಾ ಕಲಾ ಸ ಏವ ಪಿತ್ತಧರಾ ಕಲಾಃ ||
~ಆಚಾರ್ಯ ಡಲ್ಹಣ ಸುಶ್ರುತ ಸಂಹಿತಾ ಶಾರೀರ ಸ್ತಾನ ಅಧ್ಯಾಯ-4

ಅಂದರೆ,
ಯಾವುದು ಪಿತ್ತಧರಾ ಕಲಾವೋ ಅದೇ ಮಜ್ಜಾಧರ ಕಲಾ ಆಗಿದೆ…

ಕಲಾ ಎಂದರೇನು?
ಇದೊಂದು ಪರದೆಯಾಕಾರದ ಪೊರೆ(ಮ್ಯೂಕಸ್ ಮೆಂಬ್ರೇನ್), ಇದು ಧಾತುಗಳು ಮತ್ತು ಅವಯವಗಳನ್ನು ಪ್ರತ್ಯೇಕಿಸುವ ಪೊರೆಯಾಗಿದೆ. ಇದರ ಕೆಲಸ ಎಂದರೆ ಆಯಾ ಧಾತು ಅಥವಾ ಅವಯವಗಳ ಸವೆತವನ್ನು ತುಂಬಿಸುವುದರೊಂದಿಗೆ ಅವುಗಳನ್ನು ಸರ್ವದಾ ರಕ್ಷಿಸುವುದು.
ಉದಾಹರಣೆಗೆ:
ಆಮಾಶಯದಲ್ಲಿರುವ ಶ್ಲೇಷ್ಮಧರಾ ಕಲಾವು ಆಮಾಶಯವನ್ನು ಆ್ಯಸಿಡ್ ಮತ್ತು ಎಂಜೈಮ್‌ಗಳ ತೀಕ್ಷ್ಣ ಚಟುವಟಿಕೆಗಳಿಂದ ರಕ್ಷಿಸುತ್ತದೆ ಮತ್ತು ಆಹಾರದ ರಸ‌ವನ್ನು ಉತ್ಪತ್ತಿ ಮಾಡಿ ರಸಧಾತುವು ಕೊರತೆಯಾಗದಂತೆ ಪೋಷಿಸುತ್ತದೆ.

ಪಿತ್ತಧಾರ ಕಲಾ ಎಲ್ಲಿದೆ?
ಸಣ್ಣ ಕರುಳಿನ ಆರಂಭ ಭಾಗದಿಂದ ದೊಡ್ಡಕರುಳಿನ ಆರಂಭ ಭಾಗವಾದ ಉಂಡುಕ(ಸೀಕಮ್)ದ ವರೆಗೆ ಇರುವುದೇ ಪಿತ್ತಧರಾ ಕಲಾ.‌ ಇದು ವಿಶೇಷವಾಗಿ ಡಿಯೋಡಿನಮ್ ಮತ್ತು ಜಿಜುನಮ್ ಭಾಗದಲ್ಲಿ ನೆಲೆಸಿದೆ.

ಪಿತ್ತಧರಾ ಕಲಾದ ಕೆಲಸವೇನು?
ಆಹಾರದಲ್ಲಿರುವ ಪಿತ್ತದ ತೇಜಸ್ಸನ್ನೇ ಹೀರುವ ಕೆಲಸ ಈ ಕಲಾ(ಪರದೆಯದು)ದ ಕೆಲಸವಾಗಿದೆ. ಇದು ಹೇಳಲು ಸರಳವಾಗಿ ಕಂಡಂತೆ ಸರಳವಾದ ಕೆಲಸವಲ್ಲ. ತೇಜಸ್ಸು ಎಂದರೆ ಬೆಂಕಿ ಅದನ್ನು ಪ್ರತ್ಯೇಕಿಸಿ ಹಿಡಿದಿಟ್ಟುಕೊಳ್ಳುವುದು ಎಂದರೆ ಸಣ್ಣ ಕೆಲಸವೇನಲ್ಲ.

ಬೆಂಕಿಯನ್ನು(ತೇಜಸ್ಸು) ಹಿಡಿದಿಟ್ಟುಕೊಳ್ಳುವ ಕಾರ್ಯ ವಾಸ್ತವದಲ್ಲಿ ಹೇಗೆ ನಡೆಯುತ್ತದೆ?
ಮೊದಲು ಬೆಂಕಿಗೆ ಆಶ್ರಯ ಕೊಡಲು ಸಾರ ಜಿಡ್ಡನ್ನು ತಯಾರು ಮಾಡಿಕೊಳ್ಳುತ್ತದೆ, ಅದು ಯಕೃತ್ತಿನ ಆದ್ಯಕರ್ತವ್ಯ, ಅಂದರೆ ಯಕೃತ್ತು ಈ ಶರೀರದ ಬುನಾದಿಯನ್ನು ತಯಾರಿಸುವ ಅತ್ಯಂತ ಶ್ರೇಷ್ಠ ಅವಯವ, ಅದಕ್ಕೇ ಯಕೃತ್ತನ್ನು ಈ ಶರೀರದ ತಾಯಿ ಎಂದು ಕರೆಯುತ್ತೇವೆ. ತಾನು ಉತ್ಪತ್ತಿ ಮಾಡುವ ಬೈಲ್‌ಜ್ಯೂಸ್ ಅನ್ನು ಸೂಕ್ತ ಸಮಯದಲ್ಲಿ ಕರುಳಿಗೆ ಕಳಿಸಿ, ಅಲ್ಲಿರುವ ಶುದ್ಧ ಕೊಬ್ಬನ್ನು ಹೀರಿಕೊಳ್ಳುತ್ತದೆ, ಅದೇ ಬೆಂಕಿಗೆ ಆಶ್ರಯ ಕೊಡುವ ಈ ಶರೀರದ ಅತ್ಯಂತ ಸಾರಭೂತ ಜಿಡ್ಡು, ಇದು ತನ್ನ ಶಕ್ತಿಯಿಂದ ಸಹಜವಾಗಿ ಪಿತ್ತಧರಾ ಕಲಾ ಎಳೆದು ಕೊಡುವ ತೇಜಸ್ಸನ್ನು(ಬೆಂಕಿಯನ್ನು) ಹಿಡಿದುಕೊಂಡು ಮಜ್ಜಾಧಾತುವಿನಲ್ಲಿ ಸ್ಥಿರವಾಗಿ ನಿಲ್ಲುತ್ತದೆ.

ಹಾಗಾಗಿ, ಯಾರಿಗೆ ನೇತ್ರದ ಕಾಂತಿ ಬೇಕೋ ಅವರು‌ ಮೊಟ್ಟಮೊದಲು “ಶುದ್ಧತುಪ್ಪವೆಂಬ” ಜಿಡ್ಡನ್ನು ಸೇವಿಸಬೇಕು, ಶಾರೀರಿಕ ಶ್ರಮದಿಂದ ಅದನ್ನು ಸಶಕ್ತಗೊಳಿಸಿಕೊಳ್ಳಬೇಕು. ಇದೇ ನೇತ್ರವನ್ನು ರಕ್ಷಿಸಿಕೊಳ್ಳುವ ಸದ್ವಿಧಾನವಾಗಿದೆ!

ತುಪ್ಪ ಏನು ಮಾಡುತ್ತದೆ?
ಈ ಜಗತ್ತಿನ ಸಾರ ಸ್ನೇಹವೆಂದರೆ ಅದು ತುಪ್ಪ! ಶುದ್ಧ ಹಸುವಿನ ತುಪ್ಪ ಅತ್ಯಂತ ಶ್ರೇಷ್ಠ, ಏಕೆಂದರೆ ಮಾನವನಾದಿ ಸರ್ವ ಜೀವಿಗಳಿಗೂ ಬೇಕಾದ ಪೋಷಕಾಂಶಗಳು ಗೋಮಾತೆಯ ಕ್ಷೀರದಲ್ಲಿವೆ. ಆ ಕಾರಣದಿಂದಲೇ ಗೋ ಕ್ಷೀರವನ್ನು ಹುಲಿಗೂ, ಇಲಿಗೂ, ಮನುಷ್ಯರಿಗೂ ಯಾರಿಗೆ ಬೇಕೆಂದರೂ ಅವರಿಗೆ ಕುಡಿಸಿ ಬೆಳೆಸಲು ಸಾಧ್ಯವಿದೆ!

ಇಂತಹ ತುಪ್ಪವು ಬುನಾದಿಯನ್ನು ನಿರ್ಮಿಸುತ್ತದೆ, ಆಗ ಆಹಾರದ ತೇಜಸ್ಸನ್ನು ಪಿತ್ತಧರಾ ಕಲಾವು ಹೀರಿ ಈ ಸಾರ ಜಿಡ್ಡಿನೊಳಕ್ಕೆ ಸೇರಿಸಿಬಿಡುತ್ತದೆ. ಅದು ಮುಂದೆ ಮಜ್ಜೆಯಾಗಿ, ನೇತ್ರದ ಕಾಂತಿಯಾಗಿ, ಸ್ವರದ ಬಲವಾಗಿ, ಈ ಜೀವನಕ್ಕೆ ಜೀವವಾಗಿ ಸ್ಥಿರಕಾಲ ನಮ್ಮನ್ನು ಇಂದ್ರಿಯ ಸಂಪನ್ನ, ಧಾತು ಸಂಪನ್ನವಾಗಿ ಇಡುತ್ತದೆ!

ತುಪ್ಪದ ನಂತರ ಏನು ಸೇವಿಸಬೇಕು?
ನಿಮಗೆ ಹಿತ ಎನಿಸುವ ಮತ್ತು ಕಡ್ಡಾಯವಾಗಿ ನೀರಿನಲ್ಲಿಯೇ ಬೆಂದಿರುವ, ತುಪ್ಪ ಸಹಿತ ಯಾವ ಆಹಾರವನ್ನಾದರೂ ಸೇವಿಸಿ. ಹಾಗೆಯೇ, ರಾಸಾಯನಿಕ ರಹಿತ ಶುದ್ಧ ತರಕಾರಿ, ಹಣ್ಣುಗಳನ್ನೂ ಸೇವಿಸುವುದೂ ಸೂಕ್ತವಾಗಿದೆ.

ಅತ್ಯಂತ ಸೂಕ್ತ ಮತ್ತು ಅನಿವಾರ್ಯ ಎಂದರೆ ಸುಖವಾದ ನಿದ್ದೆ, ಚಿಂತೆಗೆ ಬದಲಾಗಿ ಚಿಂತನೆಗಳಿರುವ ಜೀವನವು ನೇತ್ರಾದಿ ಇಂದ್ರಿಯಗಳ ದೀರ್ಘ ಆರೋಗ್ಯ, ಆಯುಷ್ಯಕ್ಕೆ ದಾರಿಯನ್ನು ಒದಗಿಸಿಕೊಡುತ್ತವೆ!

ಬೆಳಕು ವಸ್ತುವಿಗೆ ಬಿದ್ದಾಗ ಕಣ್ಣು ಸ್ಪಷ್ಟವಾಗಿ ಕೆಲಸ ಮಾಡುತ್ತದೆ. ಕಣ್ಣಿಗೇ ಬೆಳಕು ಬಿದ್ದಾಗ ಅದಕ್ಕೆ ಕಷ್ಟವಾಗುತ್ತದೆ. ಹಾಗಾಗಿ, ಹಿತ-ಮಿತವಾಗಿ ಕಂಪ್ಯೂಟರ್, ಮೊಬೈಲ್ ಬಳಸಿ…

ಮತ್ತೊಂದು ನೇತ್ರಹಿತಕರ ಉಪಾಯವೆಂದರೆ — ಜೀವಿಗಳ ಸೇವೆ, ಕಷ್ಟದಲ್ಲಿರುವ ಜೀವಿಗೆ ಹಿಂದು-ಮುಂದು ನೋಡದೇ ಮಾಡುವ ಸೇವೆ ಮನಸ್ಸನ್ನು ಮತ್ತು ಈ ಶರೀರವನ್ನು ಅತ್ಯಂತ ಪವಿತ್ರವಾಗಿಸುತ್ತದೆ. ಪವಿತ್ರ ಎಂದರೆ ಶುದ್ಧ ಎಂದರ್ಥ, ಸೂರ್ಯ ಪೂರ್ಣ ಶುದ್ಧ ಅಂಶವಾಗಿದೆ, ಅವನಲ್ಲಿ ಎಲ್ಲವೂ ಶುದ್ಧಗೊಳ್ಳುತ್ತದೆ. ಹಾಗೆ ಸಾರಭೂತ ಜಿಡ್ಡನ್ನು ಹೊಂದಿದ ಮಜ್ಜೆಯು ಎಲ್ಲವನ್ನೂ ಶುದ್ಧಗೊಳಿಸುವಂತೆ ಇರಬೇಕೆಂದರೆ, ಸರ್ವಹಿತಕರವಾಗಿ ಇರಬೇಕೆಂದರೆ ಸೇವೆಯೊಂದು ಮಹಾಕಾರ್ಯವನ್ನು ಮಾಡುತ್ತದೆ! 🤔🤔

ನಮ್ಮ ಪ್ರಾಕ್ಟೀಸ್‌ನಲ್ಲಿ ನೋಡಿದಂತೆ ಮಜ್ಜೆ ಮತ್ತು ನೇತ್ರಗಳ ಅಸಾಧ್ಯ ರೋಗಗಳು ಸೇವೆಯಿಂದ ಸಾಧ್ಯವಾಗಿವೆ! 🤗

ಆತ್ಮೀಯರೇ,
• ನಿಮ್ಮ ನಿಮ್ಮ ಶರೀರಕ್ಕೆ ಒಗ್ಗುವ ಆಹಾರ
• ಶುದ್ಧ ತುಪ್ಪ
• ನೀರಿನಲ್ಲಿ ಬೇಯಿಸಿದ ಆಹಾರ
• ರಾಸಾಯನಿಕ ರಹಿತ ಶುದ್ಧ ತರಕಾರಿ, ಹಣ್ಣುಗಳು
• ನೆಮ್ಮದಿಯ ಜೀವನ ಮತ್ತು
• ಪರಸೇವೆ
ಇವುಗಳು ನೇತ್ರದ ಕಾಂತಿಯನ್ನು ಹೆಚ್ಚಿಸುವ ಮತ್ತು ಶರೀರ ಇಂದ್ರಿಯಗಳ ದೀರ್ಘಾಯುಷ್ಯದ ಗುಟ್ಟುಗಳು!! 🤗

ಸಂಪರ್ಕಕ್ಕೆ:
8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ

ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research, ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!