ಶಿಕಾರಿಪುರ:ದಿಢೀರ್ ಸ್ಥಾಪಿಸಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ತೆರವುಗೊಳ್ಳಿಸಿದನ್ನು ವಿರೋಧಿಸಿ ಪ್ರತಿಭನೆ..!
ಶಿಕಾರಿಪುರ: ಪಟ್ಟಣದ ರಾಘವೇಂದ್ರ ಬಡಾವಣೆ ಸಮೀಪ ದಿಢೀರ್ ಸ್ಥಾಪಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ್ದನ್ನು ವಿರೋಧಿಸಿ ಶನಿವಾರ ಬೆಳಗ್ಗೆ ನಡೆದ ಪ್ರತಿಭಟನೆ ಪಟ್ಟಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಠಿಸಿತ್ತು.
ಉದ್ಘಾಟನೆಗೆ ಸಿದ್ಧವಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುತ್ತಿರುವ ಜಾಗೆ ಹೆದ್ದಾರಿ ಬಫರ್ ಜೋನ್‌ಗೆ ಒಳಪಡುತ್ತದೆ, ಪುರಸಭೆ ಅನುಮತಿ ಪಡೆಯದೆ ಏಕಾಏಕಿ ಪ್ರತಿಮೆ ಸ್ಥಾಪಿಸಿದ ಕಾರಣಕ್ಕೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಶುಕ್ರವಾರ ರಾತ್ರೋರಾತ್ರಿ ಪ್ರತಿಮೆ ತೆರವುಗೊಳಿಸಲಾಯಿತು.
ಅದನ್ನು ವಿರೋಧಿಸಿ ನೂರಾರು ಯುವಕರು ಪೊಲೀಸರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಯಾರು ಪ್ರತಿಮೆ ತೆರವುಗೊಳಿಸಿದರು ಎನ್ನುವುದು ಸ್ಪಷ್ಟಪಡಿಸಬೇಕು, ಪ್ರತಿಮೆ ಪುನರ್‌ಸ್ಥಾಪಿಸಬೇಕು ಇಲ್ಲವಾದರೆ ಖಡ್ಗದಲ್ಲಿ ತನ್ನನ್ನೆ ತಾನು ಇರಿದುಕೊಂಡು ಸಾವನ್ನಪ್ಪುತ್ತೇನೆ ಎಂದು ನಗರದ ಅಶೋಕ್ ಘೋಷಿಸಿ ಪ್ರತಿಮೆಗೆ ನಿರ್ಮಿಸಿದ್ದ ಏಣಿಯ ಮೇಲೆ ಹತ್ತಿದರು.
ಅವರನ್ನು ಇಳಿಸಲು ಪೊಲೀಸರು ಮುಂದಾದಾಗ ಕತ್ತಿಯಿಂದ ಇರಿದುಕೊಳ್ಳಲು ಮುಂದಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಪ್ರತಿಮೆ ತೆರವು ವಿರೋಧಿಸಿ ಶುಕ್ರವಾರ ರಾತ್ರಿ ನೂರಾರು ಯುವಕರು ಮೆರವಣಿಗೆ ಮೂಲಕ ಪಟ್ಟಣ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದರು.
ಮುಂಜಾನೆ 6 ರಿಂದಲೆ ಪ್ರತಿಮೆ ತೆರವುಗೊಂಡ ಸ್ಥಳದಲ್ಲಿ ಯುವಕರು ಜಮಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಸಮೀಪ ನೂರಾರು ಯುವಕರು ರಸ್ತೆಯಲ್ಲೆ ಕುಳಿತು ಪ್ರತಿಭಟನೆ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ಮಾಡುವುದಕ್ಕೂ ಸಿದ್ಧವಾಗಿ ನಿಂತಿದ್ದ ಕಾರಣಕ್ಕೆ ಅಂಗಡಿ ಮುಗ್ಗಟ್ಟು ಮುಚ್ಚಿಲ್ಪಟ್ಟ ಕಾರಣಕ್ಕೆ ಆತಂಕ ಉಂಟಾಗಿತ್ತು.
ಪ್ರತಿಭಟನೆ ಸ್ಥಳಕ್ಕೆ ನಗರದ ಮಹಾದೇವಪ್ಪ, ಹುಲ್ಮಾರ್ ಮಹೇಶ್, ಪಚ್ಚಿಗಿಡ್ಡಪ್ಪ ಸೇರಿದಂತೆ ಹಲವು ಮುಖಂಡರು ತೆರಳಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಯಾವುದೆ ಪ್ರಯೋಜ ಆಗಲಿಲ್ಲ.
ತಹಸೀಲ್ದಾರ್ ಎಂ.ಪಿ.ಕವಿರಾಜ್, ಡಿವೈಎಸ್‌ಪಿ ಶಿವಾನಂದ, ವೃತ್ತ ನಿರೀಕ್ಷಕ ಗುರುರಾಜ್ ಮೈಲಾರಿ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲೆ ಪ್ರತಿಮೆ ಪುನರ್ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.