ಆರೋಗ್ಯದ ತಳಹದಿ ಅಡುಗೆಮನೆ- ಸಂಚಿಕೆ -03

ಆರೋಗ್ಯದ ತಳಹದಿ ಅಡುಗೆಮನೆ- ಸಂಚಿಕೆ -03

ಆಸ್ಪತ್ರೆ ರಹಿತ ಆಯುರ್ವೇದ ಜೀವನ

ನಾವು ಏನೇನನ್ನು ಬಾಯಿಯ ಮುಖಾಂತರ ಹೊಟ್ಟೆಗೆ ಕಳಿಸುವೆವೋ ಅದೆಲ್ಲವೂ ಸಹ ಆಹಾರ.. ಆಹಾರ ಸಸ್ಯ ಮೂಲಜವಿರಲಿ, ಪ್ರಾಣಿ ಮೂಲಜವಿರಲಿ ಅದರ ಉದ್ದೇಶ ಭರಣ ಮತ್ತು ಪೋಷಣೆ…

ಭರಣ ಅಂದರೆ ಭರಿಸುವುದು ಪೋಷಣೆ ಎಂದರೆ ತೊಂದರೆ ಬಾರದಂತೆ ಕಾಪಾಡುವುದು..
ಅಂದಮೇಲೆ ಆಹಾರವು ಇರುವ ಸ್ಥಿತಿಯನ್ನು ಇದ್ದಂತೆಯೇ ಉಳಿಸುವುದರ ಜೊತೆಗೆ ಕೆಡದಂತೆ ಕಾಪಾಡುವ ಗುಣ ಹೊಂದಿರುತ್ತದೆ..

ಆರೋಗ್ಯ ಪ್ರತ್ಯೇಕ ಜೀವಿಯ ದೇಹ ಪ್ರಕೃತಿ ಮತ್ತು ಸ್ವಭಾವದ ಮೂಲಕ ಅಳೆಯಲ್ಪಡುತ್ತದೆ. ಪ್ರಕೃತಿದತ್ತವಾದ ಆಹಾರವೂ ಸಹ ಯಾವುದೇ ಪ್ರಕೃತಿ ಸ್ವಭಾವಗಳನ್ನು ಪೋಷಿಸಲು ಮತ್ತು ಕಾಪಾಡಲು ಸಮರ್ಥವಾಗಿರುತ್ತದೆ.
ಒಂದು ವಿಧದ ಆಹಾರವು ತನ್ನ ರಸ, ಗುಣ, ಕರ್ಮಗಳನ್ನು ಅದು ಬೆಳೆದ ಋತುಮಾನದ ಪ್ರಭಾವದಿಂದ,
ಪ್ರಭಾವದಿಂದ ಪಡೆದಿರುತ್ತದೆ.

ಅದರ ಆಧಾರದ ಮೇಲೆ ಪ್ರಾಣಿಗಳಿಗೆ ಶಕ್ತಿ ಸಂಚಯವಾಗುತ್ತದೆ. ಪ್ರಕೃತಿಯಲ್ಲಿ ದೊರೆಯುವ ಗುಣಗಳಲ್ಲದೆ, ನಾವೆಲ್ಲ ಸ್ವೀಕರಿಸಲು ಯೋಗ್ಯವಾದ ರೂಪ ಪಡೆಯುವಲ್ಲೂ ಸಹ ಆಹಾರವು ಅನೇಕ ಸಂಸ್ಕರಣೆ ಮತ್ತು ಸಂಸ್ಕಾರಗಳ ಮೂಲಕ ತನ್ನ ಗುಣಧರ್ಮಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಜ್ಜಾಗುತ್ತವೆ. ಅಂದರೆ, ಪ್ರಕೃತಿಯಿಂದ ಪಡೆದ ಆಹಾರಗಳು ಸುಲಭವಾಗಿ ಸೇವಿಸಲ್ಪಡುವ ಹಂತಕ್ಕೆ ಬರಲು ಕೊಡಮಾಡುವ ಸಂಸ್ಕಾರಗಳೂ ಸಹ ಬಹು ಮುಖ್ಯವಾದ ಹಂತ. ಅದನ್ನೇ ಅಡುಗೆ ಮಾಡುವುದು ಅಥವಾ ಪಾಕಶಾಸ್ತ್ರ ಅಂತ ಕರೆಯಲಾಗುವುದು.

ಶಾಸ್ತ್ರ ಅಂತ ಕರೆದ ಮೇಲೆ ಇದು ತನ್ನದೇ ಆದ ಅನೇಕ ನಿಯಮ ಮತ್ತು ಹಂತಗಳ ವಿಶಾಲ ಅರ್ಥವನ್ನು ಪಡೆದಿದೆ..
ಹಿಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ.. ಎಂಬುದು ಉಪಹಾಸಕ್ಕೆ ಹೇಳಲ್ಪಟ್ಟಿದ್ದರೂ ಅಡುಗೆ ತಯಾರಿ ಮೂಲಭೂತ ಸ್ವಾದ ಮತ್ತು ಸುಲಭ ಪಚನದ ಗುಟ್ಟನ್ನು ಒಳಗೊಂಡಿದೆ..
ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತಮೇಲೆ ಕೋತಿ ವಿದ್ಯೆ ಅನ್ನುವುದೂ ಸಹ ಶಾಸ್ತ್ರದ ಹಿರಿಮೆ, ಆಪ್ಯತೆ ಮತ್ತು ಸರಳತೆಯನ್ನು ತೋರುತ್ತದೆ.. ಈ ಎರಡೂ ಗಾದೆಗಳು ಅಡುಗೆಯ ವಿಷಯದಲ್ಲಿ ಸತ್ಯ…

ಅಡುಗೆ ಮಾಡುವವರಲ್ಲೂ ಸ್ಥರಗಳಿವೆ
ಪಾಕಸಿದ್ಧರು
ಮತ್ತು ಪಾಕಪ್ರವೀಣರು…

ಪಾಕಪ್ರವೀಣರನ್ನು ಅಡುಗೆ ಮಾಡುವ ಹವ್ಯಾಸಿಗಳು ಅಥವಾ ಅಡುಗೆಮಾಡುವುದನ್ನೇ ಸರ್ವಸ್ವವಾಗಿಸಿಕೊಂಡವರು ಅಂತಲೂ
ಪಾಕಸಿದ್ಧರು ಏನೇ ಅಡುಗೆ ತಯಾರಿಸಿದರೂ ಅದು ಅಮೃತೋಪಮಾ ಮತ್ತು ಸರ್ವ ರೀತಿಯಿಂದಲೂ ಗ್ರಹಿಸಲು ಯೋಗ್ಯವಾಗಿರುತ್ತದೆ….

ವಾಚಕರು/ ಓದುಗರು ಈ ಎರಡನ್ನೂ ಅರ್ಥಮಾಡಿಕೊಳ್ಳುವಲ್ಲಿ ಗೊಂದಲಕ್ಕೆ ಬೀಳಬಾರದು..

ಕ್ರಮೇಣವಾಗಿ, ಈ ಎರಡೂ ಪದ/ ಪದವಿಗಳ ಅಂತರ ತಿಳಿಯುವಿರಿ…

ಯಾರಿಗೆ ಅಡುಗೆ ಮಾಡುವ ಮೊದಲೇ ಅದರ ವಾಸನೆ ಮತ್ತು ಸವಿಯನ್ನು ಸ್ವತಃ ಅನುಭವಿಸುವ ಸಾಮರ್ಥ್ಯ ಇದೆಯೋ ಅವರೇ ಪಾಕಸಿದ್ಧರು…

ಪಾಕಪ್ರವೀಣರದು ಹಿಂಗು ತೆಂಗಿನ ಮಾತು…

ಬಂಧುಗಳೇ, ನಮ್ಮೆಲ್ಲರ ಒಳಿತಿಗಾಗಿ ಆರೋಗ್ಯದ ತಳಹದಿ ಅಡುಗೆಮನೆ ಅಭಿಯಾನ ಆಹಾರದ ಮೂಲ ಪರಿಚಯದ ಮೂಲಕ ಪ್ರಾರಂಭಿಸಲಾಗಿದೆ. ಇದರ ಬಗ್ಗೆ ಹೆಚ್ಚು ಗಮನಕೊಟ್ಟು ನಮ್ಮೆಲ್ಲರ ಮತ್ತು ನಮ್ಮವರೆಲ್ಲರ ಆರೋಗ್ಯವನ್ನು ಸದೃಢಗೊಳಿಸೋಣ.. ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸೋಣ..

ಲೋಕಾ ಸಮಸ್ತಾಃ ಸುಖಿನೋ ಭವಂತು, ಸರ್ವೇ ಜನಾಃ ಸುಖಿನೋ ಭವಂತು. ಸನ್ಮಂಗಳಾನಿ ಭವಂತು

ಡಾ. ಸುಮತಿ ಡಂಬಳ
ಆಯುರ್ವೇದ ವೈದ್ಯೆ ಅಥರ್ವ ಆಯುರ್ಧಾಮ ಶಿವಮೊಗ್ಗ- ದಾವಣಗೆರೆ.

Admin

Leave a Reply

Your email address will not be published. Required fields are marked *

error: Content is protected !!