ಉರಿಮೂತ್ರಕ್ಕೆ ಪರಿಹಾರಗಳು…!

🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಉರಿಮೂತ್ರಕ್ಕೆ ಪರಿಹಾರಗಳು.

ನಾವಂದುಕೊಂಡತೆ ಉಷ್ಣತೆ ಹೆಚ್ಚಾಗಿದೆ, ಎಳೆನೀರು, ಬಾರ್ಲಿ ಗಂಜಿ, ಹೆಚ್ಚು ನೀರು ಸೇವನೆ ಇವು ತಾತ್ಕಾಲಿಕ ಪರಿಹಾರ ಸರಿ. ಮತ್ತೆ ಮತ್ತೆ ಬರಬಾರದೆಂದರೆ ಏನು ಮಾಡಬೇಕು? ಎಂದು ನೋಡೋಣ.

ಕೆಲವರನ್ನು ನೋಡಿದರೆ ಇಡೀ ಜೀವನ ಉರಿಮೂತ್ರ ಎಂದರೇನೆಂಬುದೇ ತಿಳಿದಿರುವುದಿಲ್ಲ, ಅವರ ಶಾರೀರಿಕ ಪ್ರಕೃತಿ ಅಥವಾ ಶಕ್ತಿ ಎಂತಹುದೆಂದು ತಿಳಿದರೆ ಸಮಸ್ಯೆಗೆ ದೀರ್ಘ ಪರಿಹಾರ ಸಿಗುವುದು.

👉 ಗಮನಿಸಿ: ಯಾವುದೇ ಕಾಯಿಲೆಗೆ ಕಾರಣವಾಗುವ ಆಹಾರ ವಿಹಾರಗಳಲ್ಲಿ ಇಂದಿನವರೆಗೆ ವ್ಯತ್ಯಾಸ ಇಟ್ಟುಕೊಂಡು, ಇಂದು ಬಿಟ್ಟ ತಕ್ಷಣ 10-15ದಿನಗಳಲ್ಲಿ ಎಲ್ಲಾ ಪರಿಹಾರ ಸಾಧ್ಯವಿಲ್ಲ. ಯಾವುದೇ ನೈಸರ್ಗಿಕ ಪರಿಹಾರದ ಪೂರ್ಣ ಫಲ ‌ಲಭಿಸಲು 120 ದಿನಗಳ ಶ್ರದ್ಧಾಯುತ ಪಾಲನೆ ಮಾಡಬೇಕು.

👉 ಶಾಶ್ವತ / ದೀರ್ಘಕಾಲದ ಪರಿಹಾರ:
• ಆಹಾರ ತಯಾರಿಕೆಯಲ್ಲಿಯೇ ಸಾಕಷ್ಟು ನೀರು ಇರಲಿ, ಇದರಿಂದ ಆಹಾರದ ಕಣಗಳು ಸುಲಭವಾಗಿ ಮತ್ತು ವೇಗವಾಗಿ ವಿಭಜನೆಗೊಳ್ಳುತ್ತವೆ, ನಿಧಾನವಾಗಿ ಜೀರ್ಣಗೊಳ್ಳುವ ಆಹಾರದಿಂದ ಉಷ್ಣತೆ ಹೆಚ್ಚು ಬಿಡುಗಡೆಗೊಳ್ಳುತ್ತದೆ.

• ಕಡಿಮೆ ನೀರು ಬಳಸಿ ತಯಾರಿಸುವ ಆಹಾರ ಸೇವಿಸಿ, ಎಷ್ಟೇ ನೀರು ಕುಡಿದರೂ ಅದು ಜೀರ್ಣಕ್ಕೆ ಸಹಕಾರಿಯಲ್ಲ.

• ಬಾಯಾರಿಕೆಯನ್ನು ಪರಿಗಣಿಸದೇ ಹೆಚ್ಚು ಹೆಚ್ಚು ನೀರು ಸೇವನೆ ಮಾಡುವುದೂ ಸಹ ಉಷ್ಣತೆ ಹೆಚ್ಚುವಂತೆ ಮಾಡುತ್ತದೆ.

• ಅತಿಯಾದ ಹುಳಿ ಸೇವನೆಯೂ, ತನ್ನ ಆಮ್ಲೀಯತೆಯ ಕಾರಣ ಉರಿಮೂತ್ರವನ್ನು ಉಂಟುಮಾಡುವ ಕಾರಣ, ಆಹಾರಕ್ಕೆ ತಕ್ಕಷ್ಟೇ ಹುಳಿ ಸೇವನೆ ಮಾಡಿದರೆ ಪರಿಹಾರವಾಗುತ್ತದೆ.

• ಉಪ್ಪು ರುಚಿಯೂ ಹೌದು, ಹೆಚ್ವಿದರೆ ಅಪಾಯವೂ ಹೌದು. ಲವಣಾಂಶ ಸೇವನೆ ಹೆಚ್ಚಿದರೆ, ಮೂತ್ರಪಿಂಡಗಳ ಸೋಸುವಿಕೆಯ ಕ್ರಿಯೆ ವ್ಯತ್ಯಾಸವಾಗುವುದು, ಇದು ಕೇವಲ ಉರಿಮೂತ್ರವಲ್ಲದೇ ಮೂತ್ರಪಿಂಡಗಳ ಆಯುಷ್ಯವನ್ನೇ ಕಸಿಯುತ್ತದೆ. ಹಾಗೂ ಶರೀರದ ರಸಧಾತು ಅತ್ಯಂತ ಶಕ್ತಿಹೀನವಾಗುವುದೂ ಸಹ ಲವಣಾಂಶದಿಂದಲೇ. ಈ ಎರೆಡು ಕಾರಣಗಳು ಒಟ್ಟಾಗಿ ಮೂತ್ರನಾಳದ ಶಕ್ತಿ ಕುಂದಿಸುತ್ತವೆ.

• ಕ್ಷಾರ, ಚುರುಗುಟ್ಟುವ ತೀಕ್ಷ್ಣಮಸಾಲೆಗಳ ಸೇವನೆ ಮಾಡಲಿಚ್ಛಿಸುವವರು ಮೊದಲು ಯಥೇಚ್ಛ ಸಿಹಿ, ಮಾಂಸ, ಮೀನು ಮುಂತಾದ ಬಲಯುತ ದ್ರವ್ಯಗಳನ್ನು ಸೇವಿಸಿ-ಜೀರ್ಣಿಸಿಕೊಂಡಿರಬೇಕು. ಅಷ್ಟು ಶಕ್ತಿ ಶರೀರದೊಳಗೆ ಇದ್ದರೆ ಮಾತ್ರ ತೀಕ್ಷ್ಣತೆಯು ಉರಿಯನ್ನುಂಟುಮಾಡದು.

• ನಿದ್ದೆ ಸರಿಯಾಗಿ ಆಗದಿದ್ದರೆ, ಸಹಜವಾಗಿ ಆಗುವ ಮೂತ್ರವೂ ಸಹ ಉರಿಯುತ್ತದೆ. ನೇತ್ರವೂ ಉರಿಯುತ್ತದೆ.

• ಉರಿಬಿಸಿಲಿನ ನಿತ್ಯ ಸಂಪರ್ಕ ಶರೀರದ ಜಲಾಂಶವನ್ನು ಹೀರುತ್ತದೆ, ನಿರಂತರ ಬಿಸಿಲಿನಲ್ಲಿದ್ದು ಅಭ್ಯಾಸ ಆದವರ ಚರ್ಮ ಕಪ್ಪಾಗಿ ನೀರು ಆವಿಯಾಗುವಿಕೆ ಕಡಿಮೆಯಾಗಿ ಹೊಂದಿಕೊಳ್ಳುತ್ತದೆ. ಅದಿಲ್ಲದೇ ವಿಶೇಷವಾಗಿ ಬಿಸಿಲಿಗೆ ಹೋದರೆ ಉರಿಮೂತ್ರ ತಪ್ಪಿದ್ದಲ್ಲ, ಅಂತಹ ಸಂದರ್ಭದಲ್ಲಿ ಅಕ್ಕಿ, ಕುಚಲಕ್ಕಿ, ಬಾರ್ಲಿ ಗಂಜಿಯನ್ನೇ ಸೇವಿಸಿ ಬಿಸಿಲಿಗೆ ಹೋಗಬೇಕು.
ಚನ್ನಾಗಿ ಗಟ್ಟಿ ಪದಾರ್ಥ ತಿಂದು ಬಿಸಿಲಿಗೆ ಹೋಗುವುದು ಸಲ್ಲದು.

• ತಂಪು ಕನ್ನಡಕ, ತಲೆಗೆ ಟೋಪಿ ಧಾರಣೆಯು ಸ್ವಲ್ಪಮಟ್ಟಿಗೆ ಸಹಾಯಕ. ಏಕೆಂದರೆ, ನೇತ್ರವು ತೇಜ ಮಹಾಭೂತದಿಂದ ನಿರ್ಮಾಣವಾಗಿದ್ದು, ಶರೀರದ ತೇಜಸ್ಸು ಕಾಣುವುದೇ ನೇತ್ರಗಳ ಕಾಂತಿಯಲ್ಲಿ. ಹಾಗಾಗಿ ಇದು ಉಷ್ಣತೆಯನ್ನು ನಿಯಂತ್ರಿಸುವ ಇನ್ನೊಂದು ಮಾರ್ಗ.

• ಚಿರ್ಭಟ ಫಲ(ಕಲ್ಲಂಗಡಿ ಹಣ್ಣು) ರಕ್ತಪಿತ್ತಕಾರಕ. ಉಷ್ಣತೆಯನ್ನು ಉಂಟುಮಾಡುತ್ತದೆ. ಹೆಚ್ಚು ಕಲ್ಲಂಗಡಿ ಸೇವಿಸಿ ಶರೀರವನ್ನು ತಂಪು ಮಾಡಿಕೊಳ್ಳುವುದು ಸಾಧ್ಯವಿಲ್ಲ. ಹೆಚ್ಚು ಕಲ್ಲಂಗಡಿ ತಿಂದವರು ಇದರ ಪರಿಣಾಮವನ್ನು ಕಂಡಿರುತ್ತಾರೆ.

• ಎಣ್ಣೆ ಪದಾರ್ಥಗಳ ಸೇವನೆಯ ನಂತರ, ಅತಿಯಾಗಿ ಬಾಯಾರಿಕೆಯಾಗುವುದು ಏಕೆ?
ಅದು ಜೀರ್ಣಗೊಳ್ಳದೆ ವಿದಾಹ ಉಂಟುಮಾಡುವುದು. ಇಂತಹ ಪದಾರ್ಥಗಳನ್ನು ಸೇವಿಸದಿರುವುದೇ ಸೂಕ್ತ ಅಥವಾ ಆದಷ್ಟು ಮಿತಗೊಳಿಸಿ, ಚಳಿಗಾಲದಲ್ಲಿ ಸ್ವಲ್ಪಮಟ್ಟಿಗೆ ಬಳಸಬಹುದು.

• ಚಹಾ-ಕಾಫಿ ಸೇವನೆ ರಸಧಾತುವನ್ನು ತೀಕ್ಷ್ಣವಾಗಿ ಒಣಗಿಸಿ, ನಿಶ್ಯಕ್ತಿಗೊಳಿಸುವ ಕಾರಣ, ಉರಿಮೂತ್ರ, ಮೈಗ್ರೇನ್, ವಾಂತಿ, ಕಿರಿಕಿರಿ…. ಎಲ್ಲವೂ ಅತೀ ಸಹಜ, ಈ ಪಾನೀಯಗಳ ನಿತ್ಯಸೇವನೆ ಯಾವ ಲಾಭವನ್ನೂ ತರದು.

• ಎಣ್ಣೆ, ಸಿಹಿ ಮುಂತಾದ ಪದಾರ್ಥಗಳ ಸೇವನೆಯ ದಿನ ಮಾತ್ರ ಅಲ್ಪ ಕಾಫೀ ಅಥವಾ ಚಹಾ ಸೇವನೆ ಉತ್ತಮ. ಅಥವಾ ಅತ್ಯಂತ ಕಡಿಮೆ ಪುಡಿ (ಕಾಲು ಗ್ರಾಂ)ಯಿಂದ ತಯಾರಿಸಿದರೆ ನಿತ್ಯ ಒಂದುಬಾರಿ ಸೇವನೆ ಮಾಡಬಹುದು.

• ಶಿರ ‌ತಂಪಾಗಿಯೂ, ಪಾದ ಬೆಚ್ಚಗೂ ಇರುವಂತೆ ನೋಡಿಕೊಂಡರೆ, ಶರೀರದ ಉಷ್ಣತೆ ಸ್ವಸ್ಥಾನದಲ್ಲಿ ನೆಲೆಯಾಗುತ್ತದೆ.

• ಉರಿಮೂತ್ರ ಆದತಕ್ಷಣ, ಹೊಕ್ಕುಳಿನ ತುಂಬ ನೈಸರ್ಗಿಕ ಶುದ್ಧ ಸುಣ್ಣವನ್ನು ತುಂಬಬೇಕು ಮತ್ತು ಬಟಾಣೆ ಕಾಳಿನ ಪ್ರಮಾಣದ ಸುಣ್ಣವನ್ನು ಉಂಡೆಮಾಡಿ ನುಂಗಬೇಕು, ತಕ್ಷಣ ಪರಿಹಾರವಾಗುತ್ತದೆ.
ಆದರೆ ನಿತ್ಯವೂ ಈ ಪರಿಹಾರ ಕಂಡುಕೊಳ್ಳಬಾರದು (ಇಂತಹುದೇ ಕಾರಣಗಳಿಗೆ ಮನೆಮದ್ದನ್ನು ತಿಳಿಸುವುದು ಸರಿಯಲ್ಲ), ಆಹಾರ, ವಿಹಾರಗಳಲ್ಲಿ ಸರಿ ಮಾಡಿಕೊಳ್ಳುವುದು ಶರೀರವನ್ನು ದೃಢವಾಗಿಯೂ‌, ಆರೋಗ್ಯದಿಂದಲೂ ಇಡುತ್ತದೆ. ಮನೆ ಮದ್ದೂ ಸಹ ಚಿಕಿತ್ಸೆಯ ಒಂದು ಭಾಗ ಅದನ್ನೇ ನಿತ್ಯ ಬಳಸಿ ಪರಿಹರಿಸಿಕೊಳ್ಳಬಾರದು.
ಉದಾ: ಕಾಫೀ ಸೇವನೆ ತಲೆನೋವನ್ನು ನಿವಾರಿಸುತ್ತದೆ. ಹಾಗೆಂದು ತಲೆನೋವು ಬಂದಾಗಲೆಲ್ಲಾ ಕಾಫಿ ಅಥವಾ ಕೆಫೇನ್ ಇರುವ ಮಾತ್ರೆ ಸೇವನೆ ಮಾಡಿಕೊಂಡರೆ ಅದು ಪರಿಹಾರವೇ ಅಲ್ಲ ಮತ್ತು ಕಾಯಿಲೆಯ ಪರಿಣಾಮ ಶರೀರ ನಿರಂತರ ಕ್ಷೀಣಿಸಿರುತ್ತದೆ.

🔺 ಸೋಂಕಿನ‌ ಅವಸ್ಥೆಯಲ್ಲೂ ಸಹ ಒಂದು ಬಾರಿ ಆ್ಯಂಟಿಬಯೋಟಿಕ್ ಕೊಟ್ಟು, ನಂತರ ಆಯುರ್ವೇದ ಹೇಳಿದ ಮೂಲ ಕಾರಣಕ್ಕೆ ಚಿಕಿತ್ಸೆ ಮಾಡಿದರೆ ಶಾಶ್ವತವಾಗಿ ಪರಿಹಾರ ಸಾಧ್ಯ.

8792290274
9148702645

ಡಾ. ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ಧಾಮ

Admin

Leave a Reply

Your email address will not be published. Required fields are marked *

error: Content is protected !!