ಶಿವಮೊಗ್ಗ : ಪೊಲೀಸರ ಕೆಲಸ ಕಠಿಣವಾದುದು ಸಮಾಜ ಪೋಲಿಸರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ: ಅಮಿತ್ ಶಾ..!
ಶಿವಮೊಗ್ಗ : ಪ್ರಸ್ತುತ ಸಮಾಜದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೋಡುವ ದೃಷ್ಠಿ ಬದಲಾವಣೆಯಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಭದ್ರಾವತಿ ನಗರದಲ್ಲಿ ಆರಂಭವಾಗಲಿರುವ ಕ್ಷಿಪ್ರ ಕಾರ್ಯ ಪಡೆ(ಆರ್’ಎಎಫ್) ಘಟಕದ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು. ಪೊಲೀಸರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.
ಪೊಲೀಸರಿಗೆ ಸಮಯದ ಮಿತಿಯೆಂಬುದೇ ಇರುವುದಿಲ್ಲ. ಸರ್ಕಾರಿ ಉದ್ಯೋಗಿಗಳ ಪೈಕಿ ಪೊಲೀಸರ ಕೆಲಸ ಕಠಿಣವಾದುದು.
ದೇಶದ ಆಂತರಿಕ ಭದ್ರತೆಯನ್ನು ನಿಭಾಯಿಸುವ ಸಿಆರ್’ಪಿಎಫ್ ನಮ್ಮ ಶಕ್ತಿ. ದೇಶದ ಮೂಲೆ ಮೂಲೆಯಲ್ಲೂ ಸಿಆರ್’ಪಿಎಫ್ ಯೋಧರ ತಮ್ಮ ಸೇವೆ ಸಲ್ಲಿಸುತ್ತಾರೆ ಎನ್ನುವುದು ದೇಶವೇ ಹೆಮ್ಮೆ ಪಡುವಂತಹ ವಿಚಾರ ಎಂದರು.
ನವದೆಹಲಿಯಲ್ಲಿರುವ ಪೊಲೀಸ್ ಸ್ಮಾರಕ ದೇಶದ ಒಂದು ಪುಣ್ಯ ಸ್ಥಳ. ಯಾರಾದರೂ ದೆಹಲಿಗೆ ಭೇಟಿ ನೀಡಿದರೆ ಈ ಸ್ಥಳವನ್ನು ವೀಕ್ಷಿಸದೇ ಬರಬೇಡಿ ಎಂದರು.
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಆಂತರಿಕ ಭದ್ರತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿ ದೇಶದಾದ್ಯಂತ ಆರ್’ಎಎಫ್ ಪಡೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು ಎಂದರು.
ಒಂದೂವರೆ ಲಕ್ಷ ಯೋಧರು ಸೇವೆ ಸಲ್ಲಿಸುತ್ತಿರುವ ಈ ಘಟಕವನ್ನು ಆರಂಭಿಸಿದ ಕೀರ್ತಿ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಾ ಬಾಯ್ ಪಟೇಲ್ ಅವರಿಗೆ ಸಲ್ಲಬೇಕು ಎಂದರು.
ನವದೆಹಲಿಯಲ್ಲಿ ರಾಷ್ಟ್ರೀಯ ಫೋರೆನ್ಸಿಕ್ ವಿವಿ ಹಾಗೂ ರಾಷ್ಟ್ರೀಯ ರಕ್ಷಾ ವಿವಿಯನ್ನು ಸ್ಥಾಪಿಸಲಾಗಿದೆ. ಇದರ ಪ್ರಯೋಜನವನ್ನು ರಾಜ್ಯ ಸರ್ಕಾರ ಪಡೆದುಕೊಳ್ಳಬೇಕು ಎಂದರು.
ಭದ್ರಾವತಿಯಲ್ಲಿ ನಿರ್ಮಾಣವಾಗುತ್ತಿರುವ ಆರ್’ಎಎಫ್ ಘಟಕಕ್ಕೆ ರಾಜ್ಯ ಸರ್ಕಾರ ಸ್ಥಳ ನೀಡಿದ್ದು, ಒಟ್ಟು 350 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ.
ಸುಸಜ್ಜಿತವಾದ ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ವಸತಿಗೃಹ, ಕ್ರೀಡಾಂಗಣ ಸೇರಿದಂತೆ ಒಂದು ವಿಶೇಷ ಟೌನ್ ಶಿಪ್ ನಿರ್ಮಾಣವಾಗಲಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಜಿಲ್ಲೆಯ ಪಾಲಿಗೆ ಇದೊಂದು ಐತಿಹಾಸಿಕ ದಿನವಾಗಿದೆ. ಸಾರಿಗೆ ಸಂಪರ್ಕ ಉತ್ತಮವಾಗಿರುವ ಭದ್ರಾವತಿಯಲ್ಲಿ ಈ ಘಟಕ ಆರಂಭವಾಗುತ್ತಿರುವುದು ತುರ್ತು ಸಂದರ್ಭಗಳಲ್ಲಿ ಸಹಾಯವಾಗಲಿದೆ ಎಂದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ್, ಆರ್’ಎಎಫ್ ಹಿರಿಯ ಅಧಿಕಾರಿಗಳು ಇದ್ದರು.
News By-Raghu Shikari-7411515737