ಈ ದೇಹ/ಶರೀರ ದೃಢವಾಗಿ ಬೆಳೆಯಲು, ಆರೋಗ್ಯದಿಂದ ಇರಲು ರೋಗ ಬರಲು ಮತ್ತು ನಶಿಸಲು ಏನು ಕಾರಣ?
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-4
ನಿನ್ನೆ ಸಪ್ತಧಾತು ಅಥವಾ ಸಪ್ತದೂಷ್ಯಗಳ ಬಗ್ಗೆ ಸಣ್ಣ ಪರಿಚಯ ಮಾಡಿಕೊಂಡಿದ್ದೇವೆ.
ಆ ಸಪ್ತ ಧಾತುಗಳೇ ಕಣ್ಣಿಗೆ ಕಾಣುವ ಈ ದೇಹ.
ಅವುಗಳನ್ನು ವಿಕೃತಿಗೊಳಿಸಿ ದೇಹಘ್ನಂತಿ ಅಂದರೆ ಶರೀರವನ್ನೇ ಹರಣ ಮಾಡುವ ಶಕ್ತಿ ಯಾವುದು ಎಂದರೆ, ಅದೇ ಗುಣರೂಪಿ ಅಥವಾ ಸೂಕ್ಷ್ಮರೂಪಿ ಅಥವಾ ಶರೀರ ಕ್ರಿಯಾರೂಪೀ ಅಂಶ ತ್ರಿದೋಷಗಳು.
ಅವುಗಳೇ ವಾತ ಪಿತ್ತ ಮತ್ತು ಕಫ(ಉದರದ ಗಾಳಿ, ವಾಂತಿಯ ಪಿತ್ತ ಮತ್ತು ಉಗುಳುವ ಕಫ ಎಂದು ಗ್ರಹಿಸಲೇಬಾರದು ಏಕೆಂದರೆ ಸಾಮಾನ್ಯ ಗ್ರಹಿಕೆಯ ಇವೆಲ್ಲಾ ಮಲಗಳು).
ಈ ದೋಷಗಳು ಉದರ ಮತ್ತು ಕರುಳಿನಲ್ಲಿ ಅಗ್ನಿಯ(enzymes) ಸಂಪರ್ಕಕ್ಕೆ ಬಂದ ಆಹಾರದಿಂದ ಸ್ಥೂಲವಾಗಿ ಉತ್ಪತ್ತಿಯಾಗಿ, ಕರುಳು ಹೀರಿಕೊಂಡ ಮೇಲೆ ಅತ್ಯಂತ ಸೂಕ್ಷ್ಮ ಮತ್ತು ಶಕ್ತಿಯುತ ಘಟಕವಾಗಿ ಮಾರ್ಪಾಡಾಗುತ್ತವೆ, ಇವೇ ನಿಜವಾದ ದೋಷಗಳು. ಇವೇ ಮುಂದೆ ಸಪ್ತಧಾತುಗಳಾಗಿ ಪರಿವರ್ತನೆಯಾಗುತ್ತವೆ, ಅಂದರೆ ಆಹಾರವೇ ಶರೀರವಾಗಿ ಬದಲಾಗುತ್ತದೆ(ಹಾಲು ಮೊಸರಾದಂತೆ ಎಂಬ ದೃಷ್ಟಾಂತವನ್ನು ಕೊಟ್ಟಿದ್ದಾರೆ ಸುಶ್ರುತ ಮಹರ್ಷಿಗಳು). ಇವನ್ನು ದೋಷ ಎಂದು ಕರೆಯಲು ಕಾರಣ ಬೇಕೇ, ಈ ಶ್ಲೋಕದ ವಿವರ ನೋಡಿ
ವಿಕೃತ ಅವಿಕೃತಾ ದೇಹಂ ಘ್ನಂತಿ ತೇ ವರ್ಧಯಂತಿ ಚ |
ವಯೋ ಅಹೋ ರಾತ್ರಿ ಭುಕ್ತಾನಾಂ ತೇ ಅಂತಃ ಮಧ್ಯ ಆದಿಗಾಃ ಕ್ರಮಾತ್|
…………………….||7||
ವಾಗ್ಭಟ ಸೂತ್ರಸ್ಥಾನ ಅಧ್ಯಾಯ-1
ದೋಷಗಳ ವಿಕೃತಿಯಿಂದ=ಘ್ನಂತಿ/ದೇಹ ನಾಶ
ಮತ್ತು
ದೋಷಗಳ ಅವಿಕೃತಿಯಿಂದ=ವೃದ್ಧಿ
ಎಷ್ಟೇ ಪರಿಶುದ್ಧ ಆಹಾರ ಪಾಲನೆ ಮಾಡಿದರೂ ಸಹಜ ರೋಗಗಳಾದ ಹಸಿವು, ಬಾಯಾರಿಕೆ, ಮುಪ್ಪು ಮತ್ತು ಮರಣಗಳನ್ನು ತಪ್ಪಿಸಲು ಅಸಾಧ್ಯ. ಏಕೆಂದರೆ,
ವಯಸ್ಸಿನ ಆದಿ, ಪ್ರತಿ ಊಟದ ಆದಿ, ಪ್ರತಿ ದಿನದ ಆದಿ, ಪ್ರತಿ ರಾತ್ರಿಯ ಆದಿಯಲ್ಲಿ “ಕಫವೂ”
*ಮಧ್ಯಮ ವಯ, ಪ್ರತಿ ಊಟದ ಮಧ್ಯ(ಆಹಾರ ಜೀರ್ಣಿಸುವಾಗ), ಪ್ರತಿ ದಿನ ಮಧ್ಯಾಹ್ನ, ಪ್ರತಿ ಮಧ್ಯ ರಾತ್ರಯಲ್ಲಿ *”ಪಿತ್ತವೂ”*
ವಾರ್ಧಖ್ಯ, ಊಟ ಜೀರ್ಣಿಸಿದ ನಂತರ, ದಿನಾಂತ, ರಾತ್ರಾಂತದಲ್ಲಿ “ವಾತ ವೂ” ಪ್ರಾಕೃತವಾಗಿ ವೃದ್ಧಿಯಾಗುತ್ತಲೇ ಇರುತ್ತದೆ ಮತ್ತು ಅದು ಸಹಜ, ಹಾಗಿರಲೇಬೇಕು. ವಾರ್ಧಖ್ಯದಲ್ಲಿ ವಾತ ವೃದ್ಧಿಯಿಂದಲೇ ಶರೀರ ಒಣಗಿ ದೇಹಾಂತವಾಗುತ್ತದೆ, ಇದು ಸಹಜ.
ಆದರೆ
ರೋಗಸ್ತು ದೋಷವೇಷಮ್ಯಂ, ದೋಷಸಾಮ್ಯಂ ಅರೋಗತಾ |
………..…………||20||
ವಾಗ್ಭಟ ಸೂತ್ರಸ್ಥಾನ ಅಧ್ಯಾಯ-1
ಅಕಾಲ ಭೋಜನ, ಅಯುಕ್ತ ಭೋಜನ, ಅಕಾಲ ನಿದ್ರಾ, ಜಾಗರಣಗಳಿಂದ
ದೋಷಗಳು ವಿಷಮತೆಯಿಂದ ವೃದ್ಧಿಯಾಗಿ, ಕ್ಷಯವಾಗಿ ಅಥವಾ ದೋಷ ವಿಕೃತವಾಗಿ ಅಸಹಜವಾಗಿ, ಚಿಕ್ಕ ಮತ್ತು ಮಧ್ಯ ವಯದಲ್ಲೇ ರೋಗಗಳು ಬರುತ್ತವೆ.
ಅದೇ ದೋಷ ಸಾಮ್ಯಾವಸ್ಥೆಯಲ್ಲಿದ್ದರೆ ಆರೋಗ್ಯ
ನಾಳೆ ರೋಗದ ವಿಧಾನ ಮತ್ತು ಕಾರಣಗಳನ್ನು ತಿಳಿಯೋಣ
ಇನ್ನೂ ಹೆಚ್ಚಿನ ಮಾಹಿತಿಗೆ ಕೆಳಗಿನ ವೈದ್ಯರುಗಳನ್ನು ಸಂಪರ್ಕಿಸಬಹುದು.
ಪ್ರೀತಿಯ ಬಂಧುಗಳೇ,
ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.
ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ