ಕರೋನ ಕಲಿಸಿದ ಬದುಕಿನ ಪಾಠ ಜೀವ-ಜೀವನ ಅದ್ಭುತ..!

ಕರೋನ ಕಲಿಸಿದ ಬದುಕಿನ ಪಾಠ ಜೀವ-ಜೀವನ ಅದ್ಭುತ..!

ಕೆಲ ದಿನಗಳ ಹಿಂದೆ PUC ಓದುತಿದ್ದ ಎಷ್ಟೋ ವಿದ್ಯಾರ್ಥಿಗಳು ಐಐಟಿ – ನೀಟ್ ಬರೆದು ಶ್ರೇಷ್ಠ ಕಾಲೇಜ್ ಸೇರಬೇಕೆಂಬ ಕನಸೊಂದಿಗೆ ವರ್ಷವಿಡೀ ಶ್ರಮಿಸಿದ್ದರು. ಪದವಿ ಮುಗಿಸುತ್ತಿದ್ದವರು ಮತ್ತೇನೋ ಓದಲು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೋ ಅಥವಾ ಬರೆಯಲೋ ಸಿದ್ದಗೊಂಡಿದ್ದರು.

ಎಷ್ಟೋ ಮನಸ್ಸುಗಳು ವಿದೇಶಕ್ಕೆ ಹಾರಲು ಸಜ್ಜಾಗಿದ್ದವು, ಎಷ್ಟೋ ಮನಸ್ಸುಗಳು ತಮ್ಮ ಹೊಸ ಕೆಲಸ-ಹೊಸ ಜೀವನದ ಕನಸ ಹೊತ್ತಿದ್ದರು.ಕೆಲವರು ಪ್ರೀತಿಸಿ ಮದುವೆಯಾಗಲು ತಯಾರಿ ನಡೆಸುತ್ತಿದ್ದರೆ, ಕೆಲವರು ಮನೆ ಕಟ್ಟಲು,ಒಡವೆಯೋ ವಾಹನ ಕರೀದಿಯೋ ಮಾಡುವವರಿದ್ದರು.ಕೆಲವರು ವಿದೇಶದಿಂದ ಮರಳಿ ತಾಯ್ನಾಡಿಗೆ ಬರುವ ಖುಷಿಯಲ್ಲಿದ್ದರು…ಕೆಲ ದೇಶ ಬಾಹ್ಯಾಕಾಶ ಪ್ರವೇಶದ ಕನಸು ಹೊತ್ತಿತ್ತು, ಕೆಲ ದೇಶ ವಿಶ್ವಕ್ಕೆ ತಾನೆ ದೊಡ್ಡಣ್ಣ ಎಂದು ತಿಳಿದಿತ್ತು.


ಆದರೆ ……ಯಾರಿಗೆ ತಿಳಿದಿತ್ತು ಇಂತಹ ದಿನವು ಬರುವುದೆಂದು, ಕನಸು ನನಸಾಗುವುದಿರಲಿ, ಕನಸು ಕಾಣುವ ಈ ಜೀವ ಉಳಿಸಿಕೊಳ್ಳಲು ಎಲ್ಲೆಡೆ ಜನ ಕಾದಾಡುತ್ತಿದ್ದಾರೆ. ನಾಳಿನ ಕನಸಿರಲಿ, ಇಂದಿನ ಊಟವು ಎಷ್ಟೋ ಜನರಿಗೆ ಮರೀಚಿಕೆಯಾಗಿದೆ.ದುಡ್ಡೊಂದಿದ್ದರೆ ಸಾಕು ಎಂದು ಜನರಿಂದ ದೂರವಿದ್ದವರು ಅದೇ ಬಡರೋಗಿಯ ಪಕ್ಕದ ಹಾಸಿಗೆಯಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದಾರೆ.ಸಾಧನೆಯೆಂದರೆ ಹಣ ಮಾತ್ರ ಎಂದವರು, ಕುಟುಂಬವೇ ಕೊನೆಗೆ ಜೊತೆಯಾಗುವುದು ಎಂದು ಅರಿಯುತ್ತಿದ್ದಾರೆ.

ವಯಸ್ಸಾದ ತಂದೆ ತಾಯಿಯನ್ನು ಆಶ್ರಮಕ್ಕೆ ದೂಡಿದವರು ಇಂದು ನಾಲ್ಕು ಗೋಡೆಗಳ ಮಧ್ಯೆಯೇ ಪೂರ್ತಿ ಜೀವನ ಕಳೆಯುವುದು ಎಷ್ಟು ಕಷ್ಟವೆಂದು ಅರಿಯುತ್ತಿದ್ದಾರೆ.ಸುಖ ಅರಸಿ ವಿದೇಶ ತೆರಳುವವರು,ಸತ್ತರು ಬದುಕಿದರು ಇದೇ ದೇಶದಲ್ಲಿರಬೇಕೆಂದು ಬಯಸುತ್ತಿದ್ದಾರೆ.

 ಸಾವು ಹೇಗೆ ಮತ್ತು ಎಂದು ಬರುವುದೋ ಎಂದು ತಿಳಿಯದ ಈ ಸಂದರ್ಭದಲ್ಲಿ ಒಮ್ಮೆ ನಾವು ಯೋಚಿಸಬೇಕಾದದ್ದು ಒಂದೇ.. ಬದುಕಿದ ಇಷ್ಟು ದಿನ ಎಷ್ಟು ಜನರಿಗೆ ಪ್ರೀತಿ ಹಂಚಿ, ಎಷ್ಟು ಜನರ ನೋವಿಗೆ ಸ್ಪಂದಿಸಿ ಒಬ್ಬ ಅದ್ಭುತ ಮಾನವನಾಗಿ ಬದುಕಿದೆವು ಎಂಬ ಒಂದೇ ಒಂದು ಪ್ರಶ್ನೆ…

ಸಾವೇ ನಮ್ಮ ಮುಂದಿದ್ದರು ನಾವು ಕನಸು ಕಾಣುವುದನ್ನು ನಿಲ್ಲಿಸುವುದಿಲ್ಲ.ಅದೇ ಮಾನವನ ಅದ್ಭುತ ಗುಣ.ಈ ಕನಸು ಕಾಣುವ ಮತ್ತು ಅದನ್ನು ನನಸು ಮಾಡುವ ಬರದಲ್ಲಿ ಇಂದಿನ ಜೀವನ ಮತ್ತು ಇಂದಿನ ಕ್ಷಣ ಜೀವಿಸಲು ಮರೆಯದಿರೋಣ..

story by: – -ಸುಮನ್ ಮಂಚಿ

Admin

Leave a Reply

Your email address will not be published. Required fields are marked *

error: Content is protected !!